ನೀವು ಲೈಂಗಿಕವಾಗಿ ಸಕ್ರಿಯರಾಗಿದ್ದಲ್ಲಿ, ನಿಮ್ಮ ಆರೋಗ್ಯದ ಸ್ಥಿತಿಯನ್ನು ನಿಖರವಾಗಿ ತಿಳಿಯಲು ನಿಯಮಿತವಾಗಿ HIV ತಪಾಸಣೆ ಮಾಡಿಸಿಕೊಳ್ಳಲೇಬೇಕು. ಆದರೆ ಕೆಲವು ಸಂದಭಗಳಲ್ಲಿ ಚಿಕಿತ್ಸಾಲಯಕ್ಕೆ ಹೋಗುವುದು ಸುಲಭವಾಗಿ ಸಾಧ್ಯವಾಗಲಾರದು, ಅಥವಾ HIV ತಪಾಸಣಾ ಕೇಂದ್ರದಲ್ಲಿನ ನಿಮ್ಮ ಖಾಸಗೀತನ ಅಥವಾ ಸುರಕ್ಷತೆಯ ಕುರಿತು ನಿಮಗೆ ಆತಂಕವಿರಬಹುದು.
ಕೆಲವು ಸ್ಥಳಗಳಲ್ಲಿ ನೀವೇ ಮನೆಯಲ್ಲಿ ಮಾಡಿಕೊಳ್ಳಬಹುದಾದ HIV ತಪಾಸಣಾ ಕಿಟ್ ದೊರೆಯುತ್ತದೆ. ಈ ಸ್ವ-ತಪಾಸಣಾ ಕಿಟ್ ಗಳು ಆಸ್ಪತ್ರೆಗಳಲ್ಲಿ ನಡೆಸುವ HIV ಪರೀಕ್ಷೆಗಳಷ್ಟು ನಿಖರವಾದ ಫಲಿತಾಂಶ ನೀಡಲಾರವು, ಆದರೆ ತಪಾಸಣೆ ಮಾಡಿಸದೇ ಇರುವುದಕ್ಕಿಂತ ಸ್ವ-ತಪಾಸಣೆ ಎಷ್ಟೋ ಮೇಲು. ಯಾವುದೋ ಕಾರಣದಿಂದ ಆರೋಗ್ಯ ಸೇವಾ ಪೂರೈಕೆದಾರರ ಮೂಲಕ HIV ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗದಿರುವ ಸಂದರ್ಭದಲ್ಲಿ ಇಂತಹ ಕಿಟ್ ಬಳಸುವುದು ಒಳ್ಳೆಯ ಉಪಾಯ.
ಮನೆಯಲ್ಲೇ ನಡೆಸುವ ಬಹುತೇಕ HIV ಪರೀಕ್ಷೆಗಳು HIVಯನ್ನು ನಿಖರವಾಗಿ ತಿಳಿಸಲು 23ರಿಂದ 90 ದಿನಗಳನ್ನು ತೆಗೆದುಕೊಳ್ಳುತ್ತವೆ. ಈ ವೇಳೆಯಲ್ಲಿ ನೀವು HIV ಪಾಸಿಟಿವ್ ಆಗಿದ್ದರೂ HIV ನೆಗೆಟಿವ್ ಎಂಬ ಫಲಿತಾಂಶ ಬರುವ ಸಾಧ್ಯತೆಯಿರುತ್ತದೆ. ನಿಮ್ಮ HIV ಸ್ಥಿತಿಯನ್ನು ಧೃಢಪಡಿಸಿಕೊಳ್ಳಲು ಈ ವಿಂಡೋ ಪೀರಿಯಡ್ ನಡೆಯುತ್ತಿರುವಾಗ ಮತ್ತು ಅದು ಮುಗಿದ ನಂತರ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯ. ನಿಮ್ಮ ತಪಾಸಣೆಯ ಪ್ಯಾಕೇಜ್ ನೊಂದಿಗೆ ಒದಗಿಸಿರುವ ಮಾಹಿತಿ ಪುಸ್ತಕದಲ್ಲಿ HIV ರೋಗ ನಿರೋಧಕಗಳು ಪತ್ತೆಯಾಗಬಹುದಾದ ಸಮಯದ ಮಾಹಿತಿ ದೊರೆಯುತ್ತದೆ. ಕಳೆದ 72 ಗಂಟೆಗಳಲ್ಲಿ ನೀವು HIVಯ ಸಂಪರ್ಕಕ್ಕೆ ಬಂದಿದ್ದೀರಿ ಎಂದು ನಿಮಗೆನಿಸಿದರೆ, ಆರೋಗ್ಯ ಸೇವಾ ಪೂರೈಕೆದಾರರೊಂದಿಗೆ ಪೋಸ್ಟ್-ಎಕ್ಸ್ಪೋಶರ್ ಪ್ರೊಫಿಲ್ಯಾಕಿಸಿಸ್ ತೆಗೆದುಕೊಳ್ಳುವ ಬಗ್ಗೆ ಕೂಡಲೇ ಮಾತನಾಡಿರಿ.
ಪ್ರಸ್ತುತ, ಮನೆಯಲ್ಲಿ HIVಯನ್ನು ಎರಡು ರೀತಿಯಲ್ಲಿ ಪರೀಕ್ಷಿಸಬಹುದು. ತಪಾಸಣೆಯ ಕಿಟ್ ಬಳಸಲಾಗುವ ಮೊದಲನೇ ವಿಧಾನದಲ್ಲಿ ಹತ್ತಿಯ ಸ್ವ್ಯಾಬ್ ನಿಂದ ಎಂಜಲಿನ ಮಾದರಿ ಶೇಖರಿಸಿಕೊಂಡು ಫಲಿತಾಂಶವನ್ನು ತಕ್ಷಣ ಮನೆಯಲ್ಲೇ ತಿಳಿದುಕೊಳ್ಳಬಹುದು. ಎರಡನೇ ವಿಧಾನದದಲ್ಲಿ, ಮನೆಯಲ್ಲಿ ರಕ್ತದ ಮಾದರಿ ತೆಗೆದುಕೊಂಡು ಅದನ್ನು ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಬಿಲ್ಡಿಂಗ್ ಹೆಲ್ತಿ ಆನ್ಲೈನ್ ಕಮ್ಯೂನಿಟೀಸ್ ಬಳಿ ಈ ಪರೀಕ್ಷೆಗಳ ಕುರಿತು ಹೆಚ್ಚು ನಿರ್ಧಿಷ್ಟವಾದ ಮಾಹಿತಿಯಿದ್ದು, ಅದು ಇಲ್ಲಿ ಲಭ್ಯವಿದೆ.
ತಪಾಸಣೆಯ ನಂತರ ನೀವು HIV ಪಾಸಿಟಿವ್ ಎಂಬ ಫಲಿತಾಂಶ ಬಂದರೆ, ಇನ್ನಷ್ಟು ಸೂಕ್ಷ್ಮವಾದ ಪರೀಕ್ಷೆ ನಡೆಸಬಲ್ಲ ಆರೋಗ್ಯ ಸೇವಾ ಪೂರೈಕೆದಾರರ ಬಳಿ ಮತ್ತೊಮ್ಮೆ ತಪಾಸಣೆ ಮಾಡಿಸಿಕೊಂಡು ನಿಮ್ಮ ಮನೆಯ ತಪಾಸಣೆಯ ಫಲಿತಾಂಶವನ್ನು ಖಾತ್ರಿ ಪಡಿಸಿಕೊಳ್ಳಿ. ಕೆಲವೊಮ್ಮೆ HIV ತಪಾಸಣೆಯಲ್ಲಿ ತಪ್ಪಾಗಿ ಪಾಸಿಟಿವ್ ಎಂಬ ಫಲಿತಾಂಶ ಬರಬಹುದು, ಹಾಗಾಗಿ ಅರೋಗ್ಯ ಸೇವಾ ಪೂರೈಕೆದಾರರ ಬಳಿ ಮತ್ತೊಮ್ಮೆ ಪರೀಕ್ಷಿಸಿಕೊಳ್ಳುವುದು ಉತ್ತಮ. ಆರೋಗ್ಯ ಸೇವಾ ಪೂರೈಕೆದಾರದ ಬಳಿಯೂ ನಿಮ್ಮ ಪಾಸಿಟಿವ್ ಫಲಿತಾಂಶ ಖಾತ್ರಿಯಾದರೆ, ಚಿಕಿತ್ಸೆ ಆರಂಭಿಸಲು ಅವರು ನಿಮಗೆ ಸಹಾಯ ಮಾಡಬಹುದು ಹಾಗೂ ಬೆಂಬಲ ಒದಗಿಸುವ ಇತರ ಗುಂಪುಗಳಿಗೆ ನಿಮ್ಮನ್ನು ಪರಿಚಯಿಸಬಹುದು. ನಿಮಗೆ ನೆಗೆಟಿವ್ ಫಲಿತಾಂಶ ದೊರೆತರೆ, ನಿಮ್ಮ ಆರೋಗ್ಯದ ಸ್ಥಿತಿಯನ್ನು ಅರಿಯಲು ನಿಯಮಿತವಾದ HIV ತಪಾಸಣೆ ಮಾಡಿಸುವುದನ್ನು ತಪ್ಪದೇ ಮುಂದುವರೆಸಿರಿ. HIV ತಡೆಗಟ್ಟಲು ಸಹಾಯ ಮಾಡುವ PrEP ಎಂಬ ದಿನ ನಿತ್ಯದ ಮಾತ್ರೆಯನ್ನು ತೆಗೆದುಕೊಳ್ಳುವ ಬಗ್ಗೆ ಮಾತನಾಡಲು ಆರೋಗ್ಯ ಸೇವಾ ಪೂರೈಕೆದಾರರನ್ನು ಭೇಟಿಯಾಗುವ ಬಗ್ಗೆ ಯೋಚಿಸಿರಿ.
ಪ್ರಸ್ತುತ, ಯೂರೋಪ್ ಮತ್ತು ಯೂ.ಎಸ್. ನಲ್ಲಿ ಮನೆಯಲ್ಲಿ ಮಾಡಬಹುದಾದ ತಪಾಸಣೆಯ ಕಿಟ್ ಗಳು ಸುಲಭವಾಗಿ ದೊರೆಯುತ್ತವೆ. ನಿಮಗೆ ಯಾವ ರೀತಿಯ ಮನೆ ತಪಾಸಣೆ ಕಿಟ್ ಗಳು ಲಭ್ಯವಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಮನೆ ತಪಾಸಣೆಯ ಕಿಟ್ ನಿಮಗೆ ಸರಿಹೊಂದುವುದಿಲ್ಲವೆಂದು ಎನಿಸಿದರೆ, ನಿಮಗೆ ಹತ್ತಿರದಲ್ಲಿರುವ HIV ತಪಾಸಣಾ ಸ್ಥಳವನ್ನು ಇಲ್ಲಿ ಹುಡುಕಿರಿ